ಅಜ್ಞಾತ

ಸುಮಾರು ಮೂರು ಲಕ್ಷ ವರ್ಷಗಳ ಹಿಂದೆ, ಎರಡು ತಿಂಗಳ ಕಾಲ ಬರೋಬ್ಬರಿ ಮಳೆ ಸುರಿಯುತ್ತಿದೆ. ಆಗಾಗ ಮದ್ಯದಲ್ಲಿ ಅಲ್ಪಸ್ವಲ್ಪ ಸುಮ್ಮನಾದರೂ, ಜನಜೀವನವನ್ನು ಸಂಪೂರ್ಣ ಸ್ತಬ್ಧಗೊಳಿಸಿದಂತಹ ಮಳೆ. ಆಗಿನ್ನೂ ಮಾನವನ ವಿಕಾಸದಲ್ಲಿ ಬಟ್ಟೆ ಹಾಕಿಕೊಳ್ಳುವ ಅಥವಾ ಭಾಷೆ ಕಲಿತು ಮಾತನಾಡುವ ಯಾವುದೇ ಸಂಪ್ರದಾಯ ಇಲ್ಲದೆ, ಆಹಾರವನ್ನರಸಿ ಗುಂಪು ಗುಂಪುಗಳಾಗಿ ಪ್ರಯಾಣ ಮಾಡಿಕೊಂಡು  ಬದುಕುತ್ತಿದ್ದ ಕಾಲ.

ಇಂತಹ ಕಾಲದಲ್ಲಿ, ದಟ್ಟ ಕಾಡಿನ ನಡುವೆ ಇರುವ ಸಣ್ಣ ಬಯಲಿನಲ್ಲಿ, ದೊಡ್ಡ ಕಲ್ಲುಬಂಡೆಗಳ ಒಂದು ಸಮೂಹದ ಮಧ್ಯೆ ಅತಿ ಎತ್ತರದ ಕಲ್ಲುಬಂಡೆಯನ್ನು ಆರಿಸಿಕೊಂಡು, ಮಳೆಯನ್ನು ಅಂಜಿಸಲೋ ಎಂಬಂತೆ ಕುಳಿತು, ಆಕಾಶವನ್ನೇ ಬಿಟ್ಟೂ ಬಿಡದೆ ನೋಡುತ್ತಿದ್ದ. ಇವನ ಹೆಸರು ಯಾರಾದರೂ ಇಟ್ಟಿದ್ದರೋ ಇಲ್ಲವೋ, ನನಗೂ ತಿಳಿಯದ ಸಂಗತಿ. ಕಥೆಯಲ್ಲಿ ಬೇರೆ ಯಾವುದೇ ಮುಖ್ಯ ಪಾತ್ರಗಳು ಇಲ್ಲದ ಕಾರಣ ಇವನಿಗೆ ಹೆಸರು ಕೊಡುವ ಅನಿವಾರ್ಯತೆ ಇಲ್ಲ. 

ಕೆಲವು ದಿನಗಳ ಹಿಂದೆ ಅವನು ಒಂದು ತಂಡದ ಜವಾಬ್ದಾರಿಯುತ ಸದಸ್ಯನಾಗಿದ್ದ. ನಲವತ್ತರಿಂದ ಐವತ್ತು ಜನರ ಆ ಗುಂಪಿನಲ್ಲಿ ಇವನೇ ಅತ್ಯಂತ ಬಲಶಾಲಿ. ಅದನ್ನು ಬೇಟೆಯಾಡಿ ಆಹಾರ ಗಿಟ್ಟಿಸುವಲ್ಲಿಯೂ ತೋರಿಸುತ್ತಿದ್ದ. ಅಷ್ಟೂ ಸದಸ್ಯರು ಒಟ್ಟಾಗಿ ಚಲಿಸುತ್ತಿದ್ದರು, ಮರದ ಕೆಳಗೆ ಒಟ್ಟಾಗಿ ಮಲಗುತ್ತಿದ್ದರು. ಒಂದೇ ಜೀವದ ವಿವಿಧ ದೇಹಗಳಂತೆ ಬದುಕಿದ್ದರು. 

ಆಗಲೇ ಈ ದರಿದ್ರ ಮಳೆ ಶುರುವಾದದ್ದು. 

ಬಹುಕಾಲ ಮಳೆಯಿಲ್ಲದೆ ಆತಂಕದಲ್ಲಿದ್ದ ಅವರೆಲ್ಲ ಮೊದಲಿಗೆ ಮಳೆಯನ್ನೂ ಸಂಭ್ರಮದಿಂದ ಸ್ವಾಗತಿಸಿದರು. ಅವರ ಹಸಿವಿಗೆ ಕಾರಣವಾಗಿದ್ದ ಬರಗಾಲದಿಂದ ಮಳೆ ಮುಕ್ತಿ ದೊರಕಿಸಿತ್ತು. ಮರಗಳಲ್ಲಿ ಮತ್ತೆ ಹಣ್ಣು ಬಿಡಲು ಶುರುವಾಗಿ ಸಣ್ಣ ಪುಟ್ಟ ಪ್ರಾಣಿಗಳು ಕಣ್ಣಿಗೆ ಬೀಳಲು ಮೊದಲಾಗಿ ಆಹಾರಕ್ಕೆ ಅದಾರ ಸಿಕ್ಕಂತಾಯಿತು.  

ಮಳೆ ಎಷ್ಟು ಬೇಕೋ ಅಷ್ಟು ಸುರಿದು ನಿಲ್ಲಲಿಲ್ಲ. 

ನದಿಗಳು ತುಂಬಿ ಹರಿಯತೊಡಗಿದವು. ಮತ್ತೇರಿದಂತೆ. 

ತಮ್ಮ ವಾಸದ ಜಾಗಕ್ಕೂ ನೀರು ಬಂದು ಸುತ್ತಲೂ ಸಮುದ್ರದಂತೆ ವಾತಾವರಣ ಸೃಷ್ಟಿಯಾಗಿ, ಮೊಣಕಾಲವರೆಗೆ ನೀರು ನಿಂತು ಯಾವ ದಿಕ್ಕಿಗೆ ನಡೆದರೆ ವಾಸ ಯೋಗ್ಯ ಪ್ರದೇಶ ಸಿಗುವುದೆಂದು ಅರಿವಾಗದೇ ರಾತ್ರಿ ಪೂರಾ ಒಟ್ಟಿಗೆ ಸ್ವಲ್ಪ ಎತ್ತರದ ಜಾಗ ಹುಡುಕಿ ನಿದ್ದೆಯಿಲ್ಲದೆ ಕಳೆದರು. ಎಲ್ಲಿ ನೋಡಿದರೂ ಮುರಿದು ಬಿದ್ದ ಮರಗಳು ಸತ್ತ ಪ್ರಾಣಿ ಪಕ್ಷಿಗಳು. ಮಳೆ ನಿಲ್ಲಲು ಯಾವ ಕಾರಣವೂ ಇರಲಿಲ್ಲ. ಅದೇ ರಾತ್ರಿ ಇಬ್ಬರು ಮಕ್ಕಳನ್ನು ಕಳೆದುಕೊಂಡದ್ದಾಯಿತು —  ಮಧ್ಯರಾತ್ರಿ ನೀರಿನ ಹೊಳೆಯಲ್ಲಿ ಕೊಚ್ಚಿಹೋದರು. ಅವರ ಸಣ್ಣ ಕೈಗಳು ಸಹಾಯಕ್ಕಾಗಿ ಚಾಚಿದರೂ, ಯಾರಿಗೂ ರಕ್ಷಿಸಲು ಸಾಧ್ಯವಾಗಲಿಲ್ಲ.

ಮರುದಿನ ಮಳೆಯು ಸ್ವಲ್ಪ ಬಿಡುವು ಕೊಟ್ಟಂತನಿಸಿ ಅಲ್ಲಲ್ಲಿ ನೆಲ ಕಾಣುವಂತಾಯಿತು. ಅವರು ಎತ್ತರದ ಪ್ರದೇಶ ಹುಡುಕಿ ಹೋಗಲೇಬೇಕಿತ್ತು. ಮತ್ತೊಮ್ಮೆ ಮಳೆ ಶುರುವಾದರೆ ಎಂಬ ಆತಂಕ ಪ್ರತಿಯೊಬ್ಬರಲ್ಲೂ.  ಆಗ ಇಡೀ ಗುಂಪಿನ ಹಲವರಿಗೆ ಖಾಯಿಲೆ ಶುರುವಾಯಿತು.

ಆರಂಭದಲ್ಲಿ ಕೆಲವರಿಗೆ ಮಾತ್ರ—ಮೈಯೊಳಗಿನ ಜ್ವರ. ಕೆಲವರಿಗೆ ಕಾಲುಗಳು ದುರ್ಬಲವಾದವು. ಹಿರಿಯರು ಕೆಲವರು ಇದು ಕೆಟ್ಟ ಗಾಳಿಯ ಪ್ರಭಾವ ಎಂದು ಊಹಿಸಿದರು. ದೇಹದ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಯಾವ ಕಡೆ ಹೆಜ್ಜೆ ಹಾಕಿದರೂ ಸಂಪೂರ್ಣ ಸುರಕ್ಷಿತ ಪ್ರದೇಶ ಎಂಬ ಜಾಗ ಅವರಿಗೆ ಸಿಗಲಿಲ್ಲ. ಅಂದಿನ ಸಂಜೆ ಸೂರ್ಯ ಮುಳುಗುವ ಸಮಯಕ್ಕೆ ಮತ್ತೆ ಭೀಕರ ಮಳೆ ಶುರು. ಅನಾರೋಗ್ಯಕ್ಕೆ ತುತ್ತಾದ ಒಂದೊಂದೇ ದೇಹ ನೆಲಕ್ಕುರುಳಲು ಶುರುವಾಯಿತು.

ಅವರು ಮೃತದೇಹಗಳನ್ನು ಸುಡಲೂ ಆಗದ ಪರಿಸ್ಥಿಯಲ್ಲಿ, ಶವಗಳನ್ನು ಅಲ್ಲೇ ಬಿಟ್ಟು ಮತ್ತೂ ದೂರ ಹೆಜ್ಜೆ ಹಾಕಿದರು. ದೂರ ನಡೆದಷ್ಟೂ ದೇಹ ದುರ್ಬಲವಾಯಿತು. ಎಲ್ಲರಂತೆ ಇವನೂ ಅಸಹಾಯಕನೆ ದೈತ್ಯ ಪ್ರಕೃತಿಯ ಮುಂದೆ. 

ಮಧ್ಯರಾತ್ರಿಯಲ್ಲಿ, ಕಾಡು ಭಯಾನಕ ಗರ್ಜನೆಗಳಿಂದ ತುಂಬಿತು. ಕೆಲವು ಪ್ರಾಣಿಗಳು ಅಡಗಿ ಕೂತರೆ ಕೆಲವು ಬೇಟೆಯಾಡಿ ಬದುಕಲೇಬೇಕಾದ ಅನಿವಾರ್ಯತೆ. ದುರ್ಬಲರು ನಡೆಯಲಾಗಲಿಲ್ಲ. ಅವರನ್ನು ಹಿಂದೆ ಬಿಟ್ಟು ಉಳಿದವರು ವೇಗವಾಗಿ ನಡೆದರೂ. ಹಿಂದುಳಿದವರು ಬದುಕಲಾಗದೆ ಸತ್ತರು. 

ನದಿಯನ್ನು ದಾಟಲು ಯತ್ನಿಸಿದಾಗ, ಕೊನೆಗೆ ಅವನ ಜೊತೆ ಉಳಿದ ಮೂರು ಜನರೂ ನದಿಯ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿ ಹೋದರು.

ಅದು ಜೀವಿಸಲು ನದಿಯ ಇನ್ನೊಂದು ಬದಿ ಆಹಾರ ದೊರೆಯಬಹುದೆಂಬ ಅಸ್ಪಷ್ಟ ನಿರೀಕ್ಷೆ.

ಆದರೆ ಪ್ರವಾಹ ಅತಿ ಕ್ರೂರವಾಗಿತ್ತು.

ಅವನು ಅವರನ್ನು ಮುಳುಗಿ ಹೋಗುತ್ತಿರುವುದನ್ನು ನೋಡುತ್ತಿದ್ದ. ಅಸಹಾಯಕನಾಗಿದ್ದ. ಕಾಲು ಸೋತು ಕೊಚ್ಚಿ ಹೋಗುವ ಭಯದಲ್ಲಿ ಬೇರೆಯೆಲ್ಲ ಮುಸುಕಾಯಿತು. ಅವರ ಕೂಗುಗಳು ಮಳೆಗೆ ಮಾತ್ರ ಕೇಳಿಸಿದವು.

ಕೊನೆಗೆ ದಡ ತಲುಪಿ ಬದುಕಿದವನು ಒಬ್ಬನೇ. ಅಳಲೂ ಏನೂ ಉಳಿದಿರಲಿಲ್ಲ, ನಗಲೂ ಏನೂ ಉಳಿದಿರಲಿಲ್ಲ. ನದಿಯಲ್ಲಿ ಕೊಚ್ಚಿ ಹೋದವರು ಉಸಿರು ಮರೆತಷ್ಟೇ ವೇಗದಲ್ಲಿ ಇವನನ್ನು ಮರೆತರು. 

ನದಿಯಿಂದ ಒಬ್ಬನೇ ದಡ ತಲುಪಿ ಒಂದು ಮರದಡಿಯಲ್ಲಿ ಕುಸಿದು ಬಿದ್ದ, ಬದುಕಿ ಉಳಿದಿದ್ದರೂ ಅವನ ಉಸಿರಿನ ಭಾರ ಅವನನ್ನು ಬಾಧಿಸಿತ್ತು. ಮೈಯೆಲ್ಲಾ ನಡುಕ, ತಣಿಯದ ಮಳೆಯ ತೀವ್ರತೆ. ಅವನು ಸಂಪೂರ್ಣ ನಿಷ್ಕ್ರಿಯನಾಗಿದ್ದ. ಕರೆಯಲು ಯಾರೂ ಬದುಕುಳಿದಿಲ್ಲ, ತಾನು ಒಬ್ಬಂಟಿ ಎನ್ನುವುದನ್ನು ಒಪ್ಪಿಕೊಳ್ಳಲು ಬಹಳ ಸಮಯವಾಯಿತು. ಆದಷ್ಟೂ ಈ ನೀರಿನಿಂದ ದೂರವಾಗಬೇಕೆಂದುಕೊಂಡು ಎದ್ದು ನಡೆಯತೊಡಗಿದ. ಹಿಂದೆ ಅವನದೇ ಹೆಜ್ಜೆ ಗುರುತುಗಳು ಸಹ ಒಂದು ಕ್ಷಣ ನಿಲ್ಲುತ್ತಿರಲಿಲ್ಲ. ಆದರೆ ಅವನ ಕಾಲುಗಳು ಮಾತ್ರ ಮುನ್ನಡೆಯುತ್ತಿದ್ದವು—ಉದ್ದೇಶವಿಲ್ಲದ ಹತಾಶೆಯೊಂದಿಗೆ.

ಹಲವಾರು ದಿನಗಳ ನಡಿಗೆ. ಅವನು ಸಾಗಿದ ಹಾದಿಯೆಲ್ಲಾ ನೀರಿನಲ್ಲಿ ಮುಳುಗಿದ ಕಾಡು, ಹಾಳಾದ ಹಕ್ಕಿಗಳ ಗೂಡುಗಳು, ನಿಶ್ಶಬ್ದ ತಾಣಗಳು. ಹಿಂದೆ ಕಳೆದು ಹೋದವರ ಧ್ವನಿಗಳು ದಿನಕ್ಕೊಂದರಂತೆ ಮರೆಯಾಗುತ್ತಾ ಜೀವನದಲ್ಲಿ ಗಾಢ ಮೌನ ಆವರಿಸಿತು. ಕೊನೆಗೆ, ಕಲ್ಲುಬಂಡೆಗಳ ಈಗಿನ ಜಾಗ ತಲುಪಿದ್ದ. ಎತ್ತರದ ಬಂಡೆ ಹತ್ತಿದ್ದು ಅವನ ಮನಸ್ಸಿಗೆ ಸಣ್ಣ ನೆಮ್ಮದಿ ನೀಡಿತು. ಅಸಹ್ಯ ಹುಟ್ಟಿಸುವ ನೀರೇ ತುಂಬಿ ಹರಿಯುವ ನೆಲದಿಂದ ಮುಕ್ತಿ. ಎಷ್ಟೇ ಮಳೆ ಸುರಿದರೂ ಬಂಡೆಯ ಮೇಲೆ ನಿಲ್ಲದೆ ಜಾರಿ ನೆಲ ಸೇರುತ್ತಿತ್ತು. ಮಳೆಯನ್ನು ಎದುರಿಸಲು ಗಟ್ಟಿ ನೆಲ ಸಿಕ್ಕಂತ ಅನುಭವ. ಆಕಾಶಕ್ಕೆ ತಲೆಯೆತ್ತಿ ಹಾಗೆಯೇ ಮಳೆಯನ್ನು ದಿಟ್ಟಿಸತೊಡಗಿದ.

ಆ ಎತ್ತರದ ಕಲ್ಲುಬಂಡೆ ಏರುವುದು ಈಗ ಅವನ ದಿನಚರಿಯ ಪ್ರಮುಖ ಬಾಗ. ಮದ್ಯಾಹ್ನ ಮಳೆ ಬಿಡುವು ಕೊಟ್ಟಾಗ ಮರದಿಂದ ಮಳೆಗೆ ಉದುರಿದ ಹಣ್ಣುಗಳ ಹುಡುಕಾಟ ಮತ್ತು ಸೇವನೆ. ಆಗಾಗ ಕಳೆದುಹೋದವರ ನೆನಪು ಮತ್ತೆ ಮರುಕಳಿಸಿ ಒಂಟಿತನ ಕಾಡುತ್ತಿತ್ತು. ಆಹಾರದ ಅಭಾವ ಬಾಧಿಸಿ ದೇಹ ನಿಶ್ಯಕ್ತಿ ಆವರಿಸಿತು. ಬಂಡೆ ಹತ್ತುವುದು ಕಷ್ಟವಾಗತೊಡಗಿತು. ಹೀಗೆ ಹಲವು ದಿನಗಳ ಕಾಲ ಒಂಟಿ ಯುವಕನ ಅರ್ಥ ಹೀನ ಬದುಕು ಅಗಾಧ ಮಳೆಯನ್ನು ಎದುರಿಸುತ್ತಿತ್ತು.

ದಿನೇ ದಿನೇ ಈ ಯುದ್ಧದಲ್ಲಿ ಬಸವಳಿದು ಸೋತು ಹೋಗಿದ್ದ. ಪ್ರತಿ ದಿನ ಪ್ರತಿ ರಾತ್ರಿ ಈ ಮಳೆಯ ಕ್ರೌರ್ಯಕ್ಕೆ ಎದುರು ನಿಲ್ಲುವ ಶಕ್ತಿ ಅವನಲ್ಲಿರಲಿಲ್ಲ. ದಿನಚರಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲದಷ್ಟು ಜಡವಾಗಿದ್ದ. ಬದಲಾವಣೆ ಇಲ್ಲದ ಬದುಕು ಸಾವಿಗೆ ಹತ್ತಿರವಾದಂತಿರುತ್ತದೆ. ಅವನಿಗಾಗಿ ಯಾರೂ ಬರುವವರಿರಲಿಲ್ಲ, ಅವನೂ ಹೋಗಲು ಅವನಿಗಾಗಿ ಕಾದ ಯಾರೊಬ್ಬರೂ ಇರಲಿಲ್ಲ. 

ಒಂದು ದಿನ ಸಂಜೆ ಸೂರ್ಯ ಮುಳುಗುವ ಸಮಯ, ಧೋ ಎಂದು ಸುರಿಯುತ್ತಿರುವ ಧಾರಾಕಾರ ಮಳೆ, ಜೋರಾದ ಗುಡುಗು, ಸಿಡಿಲು.  ತನ್ನ ಪ್ರೀತಿಯ ಎತ್ತರದ ಬಂಡೆಯನ್ನತ್ತಲು ಹೆಜ್ಜೆ ಹಾಕಿದ. ಆಯಾಸವಾದಂತನಿಸಿತು. ಮೇಲೆ ಹೋಗುವುದು ಅಸಾಧ್ಯ ಎನಿಸಿತು. ನೆಲದ ಮೇಲೆ ಹಾಗೆಯೇ ಕುಸಿದು, ಆಕಾಶವನ್ನೇ ದಿಟ್ಟಿಸುತ್ತಾ ಕೆಸರಿನಂತಿದ್ದ ನೆಲಕ್ಕೊರಗಿದ. ನೆಲದ ಮೇಲೆ ಹರಿದ ನೀರು ಮೈಯೊಳಗೆ ನುಗ್ಗಿದ ಅನುಭವವಾಗಿ, ತಣ್ಣಗಾಯಿತು. ಈಗ ಅವನಿಗೆ ತನ್ನ ಸುತ್ತಲಿನ ಪರಿಸರದ ಜೊತೆ ಒಂದಾದ ಭಾವ ಮೂಡಿ  ತನ್ನನ್ನು ತಾನೇ ಸಮರ್ಪಿಸಿಕೊಂಡಂತೆ  ದೀರ್ಘ ನಿದ್ರೆಗೆ ಜಾರಿದ. ಮರೆತುಹೋದ ಕಾಲದ ಒಂದು ಸಣ್ಣ ಅಧ್ಯಾಯವಾಗಿ. ಒಳಗಿನ ಕತ್ತಲಿಗೂ ಹೊರಗಿನ ಕತ್ತಲಿಗೂ ಇದ್ದ ಸಣ್ಣ ಎಳೆ ಮಾಯವಾಯಿತು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿಟಕಿ ಸೀಟು

ಬೆಳದಿಂಗಳ ಬಾಲೆ