ಕಿಟಕಿ ಸೀಟು
ಚಿಕ್ಕ ವಯಸ್ಸಿನಿಂದ ಕಿಟಕಿ ಪಕ್ಕದ ಸೀಟಿನಲ್ಲಿ ಕೂರುವುದು ನನಗೆ ಇಷ್ಟದ ಸಂಗತಿ. ಕಿಟಕಿ ಪಕ್ಕದ ಸೀಟು, ಬಸ್ಸು ಹೊರಟಾಗಿನಿಂದ ಸ್ಥಳ ಮುಟ್ಟುವವರೆಗಿನ ರಸ್ತೆ ಪಕ್ಕದ ಪ್ರಪಂಚದ ವಿವರಗಳನ್ನು ಇಂಚಿಂಚೂ ತೋರಿಸುವ ದೂರದರ್ಶನದಂತೆ. ಊರಿನ ಸದಸ್ಯನಾಗಿ ಬದುಕಿದಾಗ ಕಣ್ಣಿಗೆ ಕಾಣದ ಎಷ್ಟೋ ವಿವರಗಳು ಬಸ್ಸಿನ ಪ್ರಯಾಣಿಕನಾಗಿ ಕಂಡದ್ದುಂಟು. ಊರಿನ ಸದಸ್ಯನಿಗೆ ಎಂಟೂ ದಿಕ್ಕನ್ನು ನೋಡುವ ಒತ್ತಡಕ್ಕೆ ಸಿಲುಕಿ ಯಾವುದನ್ನೂ ಸರಿಯಾಗಿ ಗಮನಿಸಲಾಗದೆ ಕಂಡದ್ದರಲ್ಲಿ ಎಷ್ಟಿದೆಯೋ ಅಷ್ಟರ ಮೇಲೆ ಜೀವಿಸುತ್ತಾನೆ. ಬಸ್ಸಿನ ಕಿಟಕಿ ಪಕ್ಕ ಕೂತ ಪ್ರಯಾಣಿಕನಿಗೆ ತನಗೆ ಕಾಣುವ ಒಂದೇ ದಿಕ್ಕು ಸಂಪೂರ್ಣ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಈ ಎಲ್ಲಾ ಕಾರಣಗಳಿಂದ ಕಿಟಕಿ ಪಕ್ಕದ ಸೀಟು ಬೇಕೆನಿಸುವುದು. ಬಸ್ಸಲ್ಲಿ ಜನ ತುಂಬಿ ತುಳುಕುವಾಗ ಮೊದಲು ಖಾಲಿ ಸೀಟು ಸಿಕ್ಕರೆ ಸಾಕೆನಿಸುವ ನನಗೆ, ಬಸ್ಸು ಖಾಲಿಯಾದಾಗ ಕಿಟಕಿ ಸೀಟಿನ ಆಸೆ.
ಬೆಂಗಳೂರಿಗೆ ಯಾವುದೋ ಕೆಲಸದ ನಿಮಿತ್ತ ಬಸ್ಸು ಹತ್ತಿದ ನನಗೆ ಕೊನೆಗೂ ಅರ್ಧ ಗಂಟೆಯ ನಂತರ ಕಿಟಕಿ ಪಕ್ಕದ ಸೀಟು ಲಪಟಾಯಿಸಿಬಿಟ್ಟೆ. ಇಷ್ಟು ಹೊತ್ತೂ ಬಸ್ಸಿನಲ್ಲಿದ್ದ ಜನರ ಮೇಲೆ ಓಡಾಡುತ್ತಿದ್ದ ಕಣ್ಣುಗಳು, ಒಮ್ಮೆಲೆ ಅವರನ್ನೆಲ್ಲ ಮರೆತುಬಿಟ್ಟವು. ನನಗೂ ನನ್ನ ಸಹ ಪ್ರಯಾಣಿಕರಿಗೂ ಸಂಬಂಧವೇ ಇರದಂತೆ, ಕಿಟಕಿಯಾಚೆಗಿನ ಜನರೆಲ್ಲ ನನಗಾಗಿ, ನನ್ನ ಗಮನ ಸೆಳೆಯಲೆಂದೇ ಚಟುವಟಿಕೆಯಲ್ಲಿ ತೊಡಗಿರುವಂತೆ ಬಾಸವಾಗತೊಡಗಿತು. ನೂರಾರು ವಾಹನ, ಬೆಂಗಳೂರು ಮಹಾನಗರದ ಹೆಸರನ್ನು ಉಳಿಸಲೆಂದೇ ಬದುಕಿದ ಬಹುಮಹಡಿ ಕಟ್ಟಡಗಳು, ಬೈಕ್ ಗ್ಯಾರೇಜಿನ ಕೆಲಸದಲ್ಲಿ ನಿರತರಾದ ಹುಡುಗರು, ಬಿಸಿಲಿಗೆ ಹೆದರಿ ಕೊಡೆ ಹಿಡಿದ ಹೆಂಗಳೆಯರು, ಒಟ್ಟಿನಲ್ಲಿ ಕಿಟಕಿಯಾಚೆಗಿನ ಜನ ಏನೋ ಒಂದು ಮಾಡುತ್ತಿದ್ದರು. ಅವರು ಮಾತನಾಡುತ್ತುತ್ತಿರುವುದು ಕಂಡರೂ ಕೇಳಿಸುವುದಿಲ್ಲ ಎಂಬ ಸತ್ಯ ಮೊದಲೇ ಗೊತ್ತಿದ್ದರಿಂದ ಅದರ ಬಗ್ಗೆ ದುಃಖವಾಗಲಿಲ್ಲ. ಲೋಕ ಜ್ಞಾನ ಬೆಳೆಸುವ ಈ ನಿಜ ಪಾಠಶಾಲೆಯನ್ನು ಬಸ್ಸು ಸಣ್ಣ ಹಳ್ಳ ಹಾರಿಸಿದಾಗ ದೇಹ ಪೂರ್ತಿ ಅಲ್ಲಾಡಿ ಮತ್ತೆ ನಾನು ನಾ ಕೂತ ಬಸ್ಸಿನ ಸದಸ್ಯ ಎಂಬುದನ್ನು ನೆನಪು ಮಾಡಿತ್ತು. ಬಸ್ಸಿನ ಒಳಗೆ ನಿಂತ ಹಲವರಲ್ಲಿ ಸೀಟಿಗಾಗಿ ಕಾದು ನಿಂತವರಂತೆ ಕಂಡರು. ಹೌದು, ಸೀಟು ಸಿಕ್ಕವನಿಗೆ ಜೀವನದ ನೂರು ಚಿಂತೆ, ನಿಂತವನಿಗೆ ಸೀಟಿನದು ಮಾತ್ರ ಚಿಂತೆ.
ಬಸ್ಸಿನೊಳಗೆ ಗಮನ ಹರಿಸಿದ್ದೇ, ಮುಂದಿನ ನಿಲ್ದಾಣದಲ್ಲಿ ಇಳಿಯಲು ನನ್ನ ಪಕ್ಕದಲ್ಲಿ ಕೂತಿದ್ದವನೊಬ್ಬ ಎದ್ದು ಬಾಗಿಲಿನ ಕಡೆ ಹೆಜ್ಜೆ ಹಾಕಿದ. ಸೀಟಿಗಾಗಿ ನಡೆವ ಯುದ್ಧಗಳಲ್ಲಿ ಎಷ್ಟೋ ಗೆದ್ದು ಎಷ್ಟೋ ಸೋತು ಅನುಭವವಿದ್ದ ನನಗೆ, ತಕ್ಷಣದಲ್ಲಿ ಚಾಲಿತವಾದ ಪ್ರಜ್ಞೆ ಪಕ್ಕದಲ್ಲಿ ಖಾಲಿಯಾದ ಸೀಟು ಹಿಡಿಯುವ ಬರದಲ್ಲಿ ಪಕ್ಕಕ್ಕೆ ಸರಿದು ಬಿಟ್ಟೆ. ಏನಾಯಿತೆಂದು ಅರ್ಥವಾಗುವಷ್ಟರಲ್ಲಿ ಕಿಟಕಿ ಪಕ್ಕದ, ನಾನು ಈವರೆಗೂ ಕೂತಿದ್ದ ಸೀಟನ್ನು ಯಾವನೋ ಒಬ್ಬ ಲಪಟಾಯಿಸಿಬಿಟ್ಟಿದ್ದ. ಬಸ್ಸಿನೊಳಗಿನ ಪ್ರಯಾಣಿಕರ ಮುಖ ಚಹರೆಗಳ ಅಧ್ಯಯನದಲ್ಲಿ ನಿರತನಾಗಿ ಸೀಟಿಗೆ ಒರಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ