ಬೆಳದಿಂಗಳ ಬಾಲೆ

ಒಂದು ವಿಚಿತ್ರವಾದ ಮೌನ ನನ್ನನ್ನು ಎಚ್ಚರಿಸಿತು. ಸುತ್ತಲೂ ಹಾಲು ಚೆಲ್ಲಿದಂತೆ ಬೆಳದಿಂಗಳ ಬೆಳಕು, ನಿದ್ದೆ ಮತ್ತು ಎಚ್ಚರದ ನಡುವಿನ ಗಡಿರೇಖೆ ಮಸುಕಾಗಿತ್ತು. ನಾನು ಎಚ್ಚರವಾಗಿದ್ದೇನೋ ಅಥವಾ ಕನಸು ಕಾಣುತ್ತಿದ್ದೇನೋ ತಿಳಿಯದ ಸ್ಥಿತಿಯಲ್ಲಿ ಎಚ್ಚರವಾಯಿತು. ಒಂದು ತಣ್ಣನೆಯ ಭಾವನೆ ನನ್ನನ್ನು ಆವರಿಸಿತು. ಕಣ್ಣು ತೆರೆದಾಗ, ಆಕಾಶದಲ್ಲಿ ಪೂರ್ಣಚಂದ್ರನ ಬದಲು ಅವಳ ಮುಖ ಕಂಡಿತು. ಅವಳ ಅಗಲವಾದ ಕಣ್ಣುಗಳು ಎಂದಿನಂತೆ ಹೊಳೆಯುತ್ತಿದ್ದವು, ಉದ್ದದ ಮೂಗು, ತೀಡಿದ ಹುಬ್ಬುಗಳು ನನ್ನ ಮನಸ್ಸಿಗೆ ನಶೆ ತುಂಬುತ್ತಿದ್ದವು.

ಇದು ಕವಿತೆಯೂ ಅಲ್ಲ, ಕಥೆಯೂ ಅಲ್ಲ—ಇದು ನಿಜ. ಚಂದ್ರನಿರಲಿಲ್ಲ; ಅವಳು ಮಾತ್ರ ಅಲ್ಲಿದ್ದಳು. ಅವಳು ಛೇಡಿಸುವ ಮುಗುಳ್ನಗೆ ಹೊತ್ತು ನನ್ನ ಕಡೆ ನೋಡುತ್ತಿದ್ದಳು. ಇದು ಕನಸಾ? ಅಥವಾ ನಿಜವಾ? ಬಹುಶಃ "ಇದು ಕನಸಿರಬಹುದೇ?" ಎಂಬ ಪ್ರಶ್ನೆಯೇ, ಇದು ಕನಸಲ್ಲ ಎಂಬುದರ ಪುರಾವೆಯಾಗಿರಬಹುದು. ಯಾಕೆಂದರೆ, ನನಗೆ ತಿಳಿದಂತೆ ಈವರೆಗೂ ಕನಸಿನಲ್ಲಿ ಯಾರಿಗೂ ಈ ಸಂಶಯ ಬಂದದ್ದಿಲ್ಲ. ಹಾಗಾದರೆ, ನಾನು ನೋಡುತ್ತಿರುವುದು ನಿಜವೋ?

ನಂತರ ಮತ್ತೊಂದು ಚಿಂತೆ ಕಾಡಿತು—ನಾನು ಅತಿಯಾದ ಸಾಹಿತ್ಯ ಓದಿದ ಪರಿಣಾಮ ಹೀಗಾಗುತ್ತಿದೆಯೇ? ಇಂತಹ ಭ್ರಮೆಗೆ ಸಿಕ್ಕಿಕೊಂಡಿದ್ದೇನೆಯೇ? ನಾನು ಖಚಿತಪಡಿಸಿಕೊಳ್ಳಬೇಕು ಎನಿಸಿತು. ಅವಳನ್ನು ಕರೆಯಲು ಯತ್ನಿಸಿದೆ. ಅವಳು ಪ್ರತಿಕ್ರಿಯಿಸಲಿಲ್ಲ. ಅವಳು ಚಲನೆಯಿಲ್ಲದ, ಶಾಶ್ವತ ಬೆಳಕಿನಂತೆ ಅಲ್ಲೇ ಇದ್ದಳು. ಇಡೀ ದೇಶಕ್ಕೆ ಬೆಳಕು ಹರಡುವ ಚಂದ್ರ, ನನ್ನ ಸಲುವಾಗಿ ಮಾತ್ರ ಕೆಳಗೆ ಇಳಿಯುವುದೇ?

ನಾನು ಎರಡು ಮೂರು ಗಂಟೆಗಳ ಕಾಲ ಅವಳನ್ನು ನೋಡುತ್ತಾ ಕೂತು, ಕೊನೆಗೆ ನಿದ್ರೆಗೆ ಜಾರಿದೆ. ನೆಲ ಮೈಗೆ ಒತ್ತುತ್ತಿತ್ತು, ಸುತ್ತಲೂ ತಣ್ಣಗಿನ ಗಾಳಿ, ಮೇಲೆ ಅವಳು ಚೆಲ್ಲಿದ ಬೆಳದಿಂಗಳು.

ಬೆಳಿಗ್ಗೆ ಎಚ್ಚರವಾದಾಗ, ನಾನು ಅವಳಿಗಾಗಿ ಹುಡುಕಿದೆ. ಆದರೆ ಆಗಲೇ ಸೂರ್ಯೋದಯವಾಗಿತ್ತು. ಕಳೆದ ರಾತ್ರಿ ಆಕಾಶದಲ್ಲಿ ಕಂಡ ಅವಳು ಹಾಗೂ ಅವಳ ಮಿತ್ರ ಮಂಡಳಿ ಮಾಯವಾಗಿದ್ದವು. ಇನ್ನೊಂದು ರಾತ್ರಿಗಾಗಿ ಹಾಗೇ ಮಲಗಿ ಕಾಯಲೇ? ಎನಿಸಿತು. ಆದರೆ, ಮನೆಗೆ ಹೋಗೋಣ ಎಂದುಕೊಂಡೆ. ನನ್ನ ಮುಖದ ಮೇಲೆ ಸಣ್ಣಗೆ ನಗು ಹುಟ್ಟಿತು. ಊರೂರು ಅಳೆಯುವ ನನಗ್ಯಾವ ಮನೆ, ನನಗ್ಯಾವ ಊರು. ಊರಿಗೊಂದರಂತೆ ಇರುವ ಬಸ್ ನಿಲ್ದಾಣಗಳಲ್ಲೇ ಕಳೆದ ರಾತ್ರಿಗಳು ಹೆಚ್ಚು. ಬಸ್ ಸ್ಟಾಂಡಿನ ಗೋಡೆಗಳಿಗೆ ಮೆಟ್ಟಿದ ಸಿನಿಮಾ ಪೋಸ್ಟರುಗಳೇ ನನ್ನ ಸಂಗಾತಿಗಳು.

ನಾನು ಯಾರ ಬಲಿಯಾದರೂ ಇವೆಲ್ಲ ಹೇಳಿಕೊಳ್ಳಬೇಕೆನಿಸಿತು. ಸ್ವಲ್ಪ ದೂರದಲ್ಲಿ ಒಬ್ಬ ಚಿಕ್ಕ ಹುಡುಗ ನನನ್ನೇ ಮನರಂಜನೆಯಂತೆ ನೋಡುತ್ತಾ ನಿಂತಿದ್ದ. ಅವನಿಗೆ ಹತ್ತಿರ ಬರುವಂತೆ ಸನ್ನೆ ಮಾಡಿದೆ. ಅವನು ತಡಕಾಡುತ್ತಾ ಹತ್ತಿರ ಬರಲು ಹೆಜ್ಜೆ ಮುಂದಿಟ್ಟ, ಆದರೆ ದೂರದಿಂದ ಅವನ ತಾಯಿಯ ಗದರಿಕೆ ಅವನನ್ನು ತಡೆದು ನಿಲ್ಲಿಸಿತು. 

"ಹುಚ್ಚನ ಹತ್ತಿರ ಹೋಗಬೇಡ! ಬಾ ಇಲ್ಲಿ!"

ಅವನು ಮನೆ ಕಡೆ ಓಡಿದ. ಅವನ ಹೆಜ್ಜೆಗಳ ಶಬ್ದ ಹಗಲಿನ ಮೌನದಲ್ಲಿ ಕಳೆದು ಹೋಯಿತು. "ನಾನು ಹುಚ್ಚನಲ್ಲ! ನನ್ನನ್ನು ನಂಬಿ! ನಾನು ಅವಳನ್ನು ನೋಡಿದೆ! ಅವಳು ನಿಜವಾಗಿಯೂ ಅಲ್ಲಿದ್ದಳು!" ಎಂದು ನನ್ನಲ್ಲೇ ಜೋರಾಗಿ ಕೂಗಿದೆ. ಇನ್ಯಾರಿಗೆ ತಾನೇ ಹೇಳಲಿ? ಯಾರು ತಾನೇ ಕೇಳಲು ಸಿದ್ಧರಿದ್ದರು?

ಹಗಲಿನ ವಾಸ್ತವಕ್ಕಿಂತ ರಾತ್ರಿಯ ಭ್ರಮೆ ನನ್ನೊಳಗೆ ಹೆಚ್ಚು ನಿಜವಾಗಿತ್ತು. ವಾಸ್ತವವನ್ನು ಹುಡುಕುವ ಗೋಜಲು ನನಗೆ ಬೇಕಿರಲಿಲ್ಲ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿಟಕಿ ಸೀಟು

ಅಜ್ಞಾತ