ಪ್ರೇಮ ಪುರಾಣ
ಕಡಲ ತೀರದಲ್ಲಿ ಅಲೆಗಳು ಅಬ್ಬರಿಸುತ್ತಾ, ಮುಸ್ಸಂಜೆಯ ಸೂರ್ಯನ ಕಿರಣಗಳ ಅವಲಂಬಿಸಿ ಹೊಳೆಯುತ್ತಾ ತಾನು ಕೂತಿದ್ದ ಬಂಡೆಗೆ ಅಪ್ಪಳಿಸಿ ಅಪ್ಪಳಿಸಿ ಹಿಂತಿರುಗುತ್ತಿದ್ದವು. ತಂಪಾದ ಗಾಳಿ ಅವನ ಮುಖವನ್ನು ಸ್ಪರ್ಶಿಸಿತು. ಬಂಡೆಯ ಮೇಲೆ ಒಬ್ಬನೇ ಕೂತು, ಅಗಾಧ ಸಮುದ್ರವನ್ನು ನೋಡುತ್ತಾ ತನ್ನದೇ ಆಲೋಚನೆಯಲ್ಲಿ ಮುಳುಗಿದ್ದ. ಇದುವರೆಗೂ ಅವನು ನೋಡಿದ ಯಾವ ಹುಡುಗಿಯರೂ ಅವನ ಮನಸ್ಸಿಗೆ ಒಪ್ಪಿರಲಿಲ್ಲ. ಸಂಗಾತಿ ಬೇಕು ಎಂದು ದೇಹ ಮತ್ತು ಮನಸ್ಸು ಹಾತೊರೆಯುತ್ತಿದ್ದರೂ ಸಂಪೂರ್ಣವಾಗಿ ಇಷ್ಟವಾಗುವ ಹುಡುಗಿ ಸಿಕ್ಕಿರಲಿಲ್ಲ. ಎಲ್ಲರಲ್ಲೂ ಒಂದಲ್ಲ ಒಂದು ನ್ಯೂನ್ಯತೆ. ಅವನ ಕನಸಿನಲ್ಲಿದ್ದ ಆ ಹುಡುಗಿಯನ್ನು ಹುಡುಕಿ ಹುಡುಕಿ ಸೋತು ಆಲೋಚಿಸುತ್ತಾ ಕೂತಿದ್ದ.
ಅದೇ ಬಂಡೆಗೆ ತಾಕಿದಂತಿರುವ ಪಕ್ಕದ ಇನ್ನೊಂದು ಬಂಡೆಯ ಮೇಲೆ ಒಂದು ಸುಂದರ ಹುಡುಗಿಯೂ ಕೂತಿದ್ದಳು. ಅವಳ ನೋಟವೂ ಅದೇ ಸಮುದ್ರದ ಅಲೆಗಳತ್ತ. ಅವಳೂ ಕೂಡ ಒಬ್ಬಂಟಿ. ತನ್ನ ಪರಿಪೂರ್ಣ ಸಂಗಾತಿಗಾಗಿ ಎದುರು ನೋಡುತ್ತಾ ಜೀವನದ ಏಕಾಂತದಲ್ಲಿ ಸೋತ ಹೆಣ್ಣು ಜೀವ.
ಇಬ್ಬರೂ ಕೂತು ಸಮುದ್ರವನ್ನೇ ದಿಟ್ಟಿಸುತ್ತಿದ್ದಾರೆ, ಇಬ್ಬರೂ ಒಂದೇ ಭಾವನೆಯಲ್ಲಿ ಮುಳುಗಿ. ಅವಳಿಗಾಗಿ ಅವನು ಮತ್ತು ಅವಳಿಗಾಗಿ ಅವನು ಪರಸ್ಪರ ಕಾಯುತ್ತಿದ್ದರು. ಇಬ್ಬರ ಪರಸ್ಪರ ಸಾನಿದ್ಯದಲ್ಲಿರುವುದು ಇಬ್ಬರ ಗಮನಕ್ಕೂ ಬಂದಿರಲಿಲ್ಲ. ಇಬ್ಬರ ಒಬ್ಬರಿಗೊಬ್ಬರು ಬೆನ್ನು ಮಾಡಿ ಕೂತಿದ್ದರು. ಇಬ್ಬರಿಗೂ ಇದ್ದ ಒಂದೇ ಸಂಗಾತಿ ಎಂದೂ ಬಿಟ್ಟು ದೂರ ಹೋಗದ ಸಮುದ್ರ ಮಾತ್ರ.
ನಿದಾನವಾಗಿ ಬೆಳಕು ಮರೆಯಾಗಿ ಕತ್ತಲಾಗತೊಡಗಿತು, ಗಾಳಿ ಮತ್ತಷ್ಟು ತಣ್ಣಗೆ ಮೈಗೆ ಚಳಿ ಮೂಡಿಸುತ್ತಿತ್ತು. ನಿಟ್ಟುಸಿರುಬಿಟ್ಟು ಎದ್ದಳು. ಇನ್ನೇನು ಮನೆ ಸೇರಿಕೊಳ್ಳಬೇಕು. ಇಂದು ಅವಳು ಕಂಪನಿಗೆ ನೈಟ್ ಶಿಫ್ಟ್ ಹೋಗಬೇಕಿತ್ತು. ಕೊನೆಯ ಬಾರಿ ಆ ಬಂಡೆಯನ್ನು ನೋಡಿದಳು—ಅಗಾಧ ಸಮುದ್ರದ ಎದುರು ಒಬ್ಬಳೇ ಎಂಬುದು ನೆನೆದು ಭಯವಾಗಿ ಬಿರುಸಿನಿಂದ ಮನೆಗೆ ಹೆಜ್ಜೆ ಹಾಕಿದಳು. ಸಮುದ್ರ ತೀರದಿಂದ ಅವಳಿದ್ದ ಅಪಾರ್ಟ್ಮೆಂಟ್ ಗೆ ಅರ್ಧ ಗಂಟೆಯ ನಡಿಗೆ. ಏಳೂವರೆಗೆ ಸರಿಯಾಗಿ ಕ್ಯಾಬ್ನಾ ಬರುವುದಿತ್ತು. ನಾಳೆ ಮತ್ತೆ ಅದೇ ಬಂಡೆ ಹತ್ತಿ ಕೂರುವ ಅಸ್ಪಷ್ಟ ಆಸೆ ಬಂದು ಹೋಗುತ್ತಿತ್ತು.
ಇವನು ಮಾತ್ರ ಕತ್ತಲಾದರೂ, ಬೆಳದಿಂಗಳ ಬೆಳಕಿನಲ್ಲಿ ಅಲ್ಲೇ ಕೂತಿದ್ದ. ಒಬ್ಬನೇ. ಸಮುದ್ರ ಮಾತ್ರ ಸಂಗೀತ ನುಡಿಸುತ್ತಿತ್ತು. ಏನೋ ಸದ್ದಾದಂತನಿಸಿ ಹಿಂದೆ ತಿರುಗಿದ. ಕುದುರೆಯ ಮೇಲೆ ಗೆಳೆಯ ಬಂದು ಜೋರಾಗಿ ಕೂಗಿದ "ದೂರದ ಹಳ್ಳಿಯಲ್ಲೆಲ್ಲೋ ಕೋಮು ಗಲಭೆ ಶುರುವಾಗಿದೆಯಂತೆ. ಕೂಡಲೇ ಹದಿನೈದು ಜನ ಸೈನಿಕರೊಡನೆ ಕೂಡಲೇ ಹೊರಟು ಗಲಭೆ ಶಾಂತಗೊಳಿಸಲು ದಳವಾಯಿಗಳಿಗೆ ರಾಜಾಜ್ಞೆಯಾಗಿದೆ. ನೀನು ಬೇಗ ನಮ್ಮೊಂದಿಗೆ ಹೊರಡಬೇಕಿದೆ. ಬೇಗ ಬಾ." ಎಂದು ಕೂಗಿದ. ಆಯಾಸಗೊಂಡವನಂತೆ ಬಂಡೆ ಇಳಿದು ಕುದುರೆಯ ಕಡೆ ನಡೆದು ಏನೂ ಮಾತನಾಡದೆ ಸ್ನೇಹಿತನನ್ನು ಹಿಂಬಾಲಿಸಿದ. ಹೆಜ್ಜೆ ಮುಂದೆ ಸಾಗಿದರೂ, ಹೃದಯ ಅಲ್ಲೇ ಮರೆತಿದ್ದ.
ಇಬ್ಬರೂ ತಮ್ಮ ತಮ್ಮ ದೈನಂದಿನ ನಿರಂತರತೆಯಲ್ಲಿ ಮುಳುಗಿದರು. ಕಾಲ ಇಬ್ಬರನ್ನೂ ಬೇರ್ಪಡಿಸಿತ್ತು. ಒಬ್ಬರಿಗೊಬ್ಬರು ಹುಡುಕಾಟದಲ್ಲಿದ್ದರೂ ಸಿಗುವ ಯಾವುದೇ ಸಾದ್ಯತೆಗಳಿರಲಿಲ್ಲ. ಕಾಲ ದೇಶ ಭಾಷೆಗಳಲ್ಲಿ ಕಳೆದು ಹೋದ ಅಸಂಖ್ಯಾತ ಪ್ರೇಮಿಗಳ ಪಟ್ಟಿಗೆ ನೋಂದಾಯಿಸಿಕೊಂಡವರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ