ಗುಲಾಮರು

ಎಂದೂ ಕೈಗೆ ಬರದ ಸಂಬಳದ ಆಸೆಯಲ್ಲಿ, ಎಂದೂ ಕೊನೆಯಾಗದ ನೌಕರಿ ಹಿಡಿದ ನಾನು! ಬೆಳಿಗ್ಗೆ ಕಚೇರಿಗೆ ಹೋಗಿ, ರಾತ್ರಿ ಸವೆದು ಮನೆ ಸೇರುವ ದಿನಚರಿ—ಈ ಜಂಜಾಟದಿಂದ ಬಿಡುವು ಬೇಕೆನಿಸಿತು. ಬೆಂಗಳೂರಿಗೆ ಬೀಗ ಜಡಿದು, ದೂರ ದೂರ ಏಕಾಂತವನ್ನರಸಿ ಹೊರಟೆ… 

ಸಮುದ್ರ ದಂಡೆಯ ಮೇಲೆ ಯಾರೂ ಇರದ ಜಾಗ ಆರಿಸಿ ಒಬ್ಬನೇ ಕೂತಿದ್ದೆ. ಎದುರಿಗೆ ಕೊನೆಯೇ ಇಲ್ಲದೆ ಹರಡಿಕೊಂಡಿದ್ದ ವಿಶಾಲ ಸಮುದ್ರ. ಸಮುದ್ರದ ಅಲೆಗಳು ಹತ್ತಿರಕ್ಕೆ ಬಂದು ವಾಪಸ್ಸು ಹೋಗುತ್ತಿದ್ದವು. ನನ್ನನ್ನು ಮುಟ್ಟಲು ಇಷ್ಟವಿಲ್ಲದೆ ಮುನಿಸಿ ನಡೆದ ಗೆಳತಿಯಂತೆ ಅಥವಾ ಪ್ರಕೃತಿ ತನ್ನ ಮಗುವನ್ನು ಆಟಾಡಿಸಲೆಂಬಂತೆ. ಹಾಗೆಯೇ ದಿಟ್ಟಿಸುತ್ತಾ ಕೂತೆ. 

ಇಲ್ಲ, ಸಮುದ್ರ ಸಹ ಸ್ವತಂತ್ರವಾಗಿರಲಿಲ್ಲ. ತನ್ನದೇ ಹನಿಗಳ ಗುಲಾಮ. ಚಿಕ್ಕ ಹನಿಗಳು ಸೇರಿ ಅಲೆಗಳಾಗಿ, ಅಲೆಗಳು ಸೇರಿ ಅಗಾಧವಾಗಿ ಭಾಸವಾಗುವ ನೀರಿನ ರಾಶಿ. ತುಂಬಿದ ಸಮುದ್ರ ಪ್ರತಿ ಹನಿಯ ಗುಲಾಮನಾಗಿತ್ತು. ಹನಿಗಳ ಒಟ್ಟು ಆಜ್ಞೆಯನ್ನು ಹೊತ್ತು ಜೀವಿಸುತ್ತಿತ್ತು. ಸ್ವತಂತ್ರ ಮನುಷ್ಯ ಸೇರಿ ಬೃಹತ್ ಸಮಾಜ ರೂಪಿಸಿ, ತನಗೆ ಅರಿವಿಲ್ಲದೆಯೇ ಅದರ ಅಗಾದತೆಗೆ ಗುಲಾಮನಾಗಿ ಬದುಕಿದಂತೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿಟಕಿ ಸೀಟು

ಬೆಳದಿಂಗಳ ಬಾಲೆ

ಅಜ್ಞಾತ