ಒಂದು ಓತಿಯ ಕಥೆ
ಓತಿಕ್ಯಾತ ರಸ್ತೆಯ ನಡುವೆ ವಿಲವಿಲ ಒದ್ದಾಡುತ್ತಲೇ ಇತ್ತು. ಅದರ ನರಳಾಟ ನನಗೇ ಬಾರೀ ಸಂಕಟ ತಂದಿಟ್ಟಿತ್ತು. ಆಗೊಮ್ಮೆ ಈಗೊಮ್ಮೆ ಕಾರು ಬೈಕುಗಳು ಬರ್ರ್ ಎಂದು ಆಕಡೆಯಿಂದ ಈಕಡೆ, ಈಕಡೆಯಿಂದ ಆಕಡೆ ಹಾರುತ್ತಿದ್ದವು. ಬಲಕ್ಕೆ ತಿರುಗಿ ಒಂದು ವಾಹನ ಕಣ್ಮರೆಯಾಗುವ ಮೊದಲೇ ಎಡದಿಂದ ಇನ್ನೊಂದು ವಾಹನದ ಸದ್ದು ಶುರುವಾಗುತ್ತಿತ್ತು. ಹಾಗೆಯೇ ಎರಡು ನಿಮಿಷ ನೋಡುತ್ತಾ ನಿಂತಿದ್ದೆ. ನಾನು ತಾನೇ ಏನು ಮಾಡಬಹುದು? ನಾನು ಹೋಗಿ ಅದನ್ನು ರಕ್ಷಿಸಿಕೊಳ್ಳಬಹುದೇ? ಅದರ ಜೀವ ಇನ್ನು ಕೆಲವೇ ಕ್ಷಣಗಳಲ್ಲಿ ಹಾರಿ ಹೋಗಲಿದೆ ಎಂಬುದು ಗೊತ್ತಿರುವಾಗ ನಾನು ಹೋಗಿ ಅದನ್ನು ರಸ್ತೆಯ ಬದಿಗೆ ಸರಿಸುವುದರಿಂದ ಅದಕ್ಕೆ ಯಾವ ರೀತಿಯ ಸಹಾಯ ಆಗಬಹುದು ಎಂಬುದು ನನಗೆ ಕಲ್ಪನೆಗೆ ಬರಲಿಲ್ಲ. ಸದ್ಯದ ಪರಿಸ್ತಿತಿಯಲ್ಲಿ ಅದು ನನ್ನ ಕಣ್ಣೋಟದಿಂದ ತಪ್ಪಿಸಿಕೊಂಡು ಓಡಿ ಹೋಗದಂತೆ ನೋಡುತ್ತಾ ಅದು ತಾನಾಗೆ ಕಾರುಗಳ ಚಕ್ರಗಳಿಂದ ತಪ್ಪಿಸಿಕೊಂಡು ರಸ್ತೆ ಬದಿ ತಲುಪುವುದೋ ಅಥವಾ ಯಾವುದಾದರೂ ಕಾರಿನ ಚಕ್ರಕ್ಕೆ ಸಿಕ್ಕಿ ಅಪ್ಪಚ್ಚಿಯಾಗಿ ಸಾಯುವುದೋ ಎಂದು ನೋಡುತ್ತಿರುವುದೊಂದೇ ನಾನು ಮಾಡುತ್ತಿದ್ದ ಕೆಲಸ.
ಅದು ರಸ್ತೆಯ ಆ ಕಡೆಯ ಗಿಡಗಳ ಮಧ್ಯದಿಂದ ಓಡುತ್ತಾ ರಸ್ತೆಯ ಮದ್ಯಕ್ಕೆ ಬರುವವರೆಗೂ ನಾನು ನೋಡಿದ್ದೆ. ಅದು ನೇರವಾಗಿ ಒಂದೇ ವೇಗದಲ್ಲಿ ಬಂದಿದ್ದರೆ ಯಾವುದೇ ಹಾನಿಯಿಲ್ಲದೆ ಈಕಡೆ ಬದಿ ತಲುಪುತ್ತಿತ್ತು. ಆದರೆ ಅದರ ಹುಟ್ಟು ಗುಣವೆಂಬಂತೆ ರಸ್ತೆಯ ಮದ್ಯದಲ್ಲಿ ನಿಂತು ಆಕಡೆ ಈಕಡೆ ಕತ್ತು ತಿರುಗಿಸುವಸ್ಟರಲ್ಲಿ ವೇಗವಾಗಿ ಬಂದ ಕಾರು ತನ್ನ ಒಂದು ಕಾಲು ಹಾಗೂ ಬಾಲ ಸಂಪೂರ್ಣ ನಿಷ್ಕ್ರಿಯವಾಗುವಂತೆ ಚಕ್ರವನ್ನು ಹತ್ತಿಸಿಕೊಂಡು ಹೋಗಿತ್ತು.
ನಿಂತಿದ್ದ ಜಾಗದಿಂದ ಸ್ವಲ್ಪ ಹತ್ತಿರಕ್ಕೆ ಸರಿದು ಸಂಪೂರ್ಣ ಚಿತ್ರಣ ಸರಿಯಾಗಿ ಕಾಣುವಂತೆ ಕುಳಿತುಕೊಂಡೆ. ಅದು ಅಲ್ಲೇ ಇದ್ದಷ್ಟೂ ನನಗೆ ಆತಂಕ ತಪ್ಪಿದ್ದಲ್ಲ, ಕಾರಿನ ಚಕ್ರಕ್ಕೆ ಸಿಕ್ಕಿ ಸತ್ತರೆ ಮತ್ತಷ್ಟು ಸಂಕಟ, ಹೇಗೋ ಒದ್ದಾಡಿ ರಸ್ತೆ ಬದಿ ತಲುಪಿ ಗಿಡಗಳಲ್ಲಿ ಕಣ್ಮರೆಯಾದರೆ ನನಗೆ ಕಾಣದಂತೆ ಬದುಕುಳಿಯಿತೇನೋ ಎಂಬ ಆಶಾವಾದ. ಅಷ್ಟರಲ್ಲಿ ಕಾರೊಂದು ಬಂದು ಸಂಪೂರ್ಣವಾಗಿ ಅದರ ಮೇಲೆ ಚಕ್ರ ಹರಿದು ಚಪಾತಿಯಂತೆ ಅಪ್ಪಚ್ಚಿಯಾಯಿತು. ನನ್ನ ಕಣ್ಣುಗಳು ಒಂದು ಕ್ಷಣ ಮುಚ್ಚಿ ಮುಖ ಸಂಕುಚಿಸಿ 'ಛೆ' ಎಂದು ಉದ್ಗರಿಸುವ ಮೂಲಕ ಅದಕ್ಕೆ ಸಂತಾಪ ಸೂಚಿಸಿದೆ.
ಈ ದೃಶ್ಯದಿಂದ ಬಹಳವಾಗಿ ನೋವಾಯಿತು. ನಾನು ಅದರ ಸಹಾಯಕ್ಕೆ ದಾವಿಸದೆ ನೋಡುತ್ತಾ ಕುಳಿತದ್ದು, ಅದರ ಸಾವಿಗೆ ನಾನು ಸಹ ಪರೋಕ್ಷವಾಗಿ ಕಾರಣವಾದಂತೆ ಎನಿಸತೊಡಗಿತು. ಬರುವ ವಾಹನಗಳನ್ನು ತಡೆದು ಆ ಓತಿಯನ್ನು ಎತ್ತಿ ರಸ್ತೆಯ ಬದಿಗೆ ಬಿಡಬಹುದಿತ್ತು. ಇಲ್ಲ ಕಡ್ಡಿಯಲ್ಲಿ ಜೋರಾಗಿ ರಸ್ತೆಯ ಬದಿಗೆ ತಳ್ಳಬಹುದಿತ್ತು. ಆದರೆ ಇವೆರಡರಲ್ಲಿ ಯಾವುದು ಹೆಚ್ಚು ಸೂಕ್ತ ಎಂದು ಯೋಚನೆ ಮೂಡಿತು. ಕಯ್ಯಲ್ಲಿ ಮುಟ್ಟಿದರೆ ಅದು ಕಚ್ಚುವ ಸಾಧ್ಯತೆಗಳಿವೆ. ಆದರೆ ಕಚ್ಚಿದರೂ ನನ್ನ ಪ್ರಾಣಕ್ಕೇನೂ ತೊಂದರೆಯಿಲ್ಲ ಎಂಬುದಂತೂ ನಿಜ. ಆದರೂ ಸಣ್ಣ ಗಾಯವಾಗಬಹುದು. ಅದರ ಜೀವಕ್ಕಿಂತ ನನಗಾಗುವ ಸಣ್ಣ ಗಾಯದ ಕಡೆಗೆ ಗಮನ ಹರಿಸುವುದು ಎಷ್ಟು ಸೂಕ್ತ. ಕಡ್ಡಿಯ ಮೂಲಕ ತಳ್ಳಿದ್ದರೆ ಅದಕ್ಕೆ ನಾನೇ ನೇರವಾಗಿ ನೋವು ಮಾಡಿದಂತಾಗುತ್ತಿತ್ತು. ಆದರೆ ಅದು ಬದುಕುಳಿಯುವ ಸಂಬವವಿತ್ತು. ಅದಕ್ಕೆ ನೋವು ಮಾಡಲು ಹಿಂದೇಟು ಹೊಡೆದು ಅದರ ಪ್ರಾಣವನ್ನೇ ಬಲಿ ಕೊಟ್ಟದ್ದು ಎಷ್ಟು ಸೂಕ್ತ. ಅದರ ಸಾವಿನ ನಂತರ ಇಷ್ಟೆಲ್ಲಾ ಯೋಚಿಸುವುದು ಯಾವ ರೀತಿ ಉಪಯೋಗಕ್ಕೆ ಬಾರದು ಎಂದು ಗೊತ್ತಿದ್ದರೂ ಅದರ ದಾರುಣ ಸಾವು ಕಂಡ ನನಗೆ ಅದರ ಸಾವಿನಲ್ಲಿ ನನ್ನ ಏನೂ ಮಾಡದೇ ಸುಮ್ಮನಿರಲು ತೆಗೆದುಕೊಂಡ ನಿರ್ದಾರದ ಪಾತ್ರ ಕಂಡಿತವಾಗಿಯೂ ಇತ್ತು. ಇತರರು ಕಷ್ಟದಲ್ಲಿದ್ದಾಗ ನನ್ನ ನೈತಿಕ ಹೊಣೆಗಾರಿಕೆಯ ಬಗ್ಗೆ ಯೋಚಿಸತೊಡಗಿದೆ.
ಹಾಗೇ ನೋಡಿದರೆ, ಅದನ್ನು ರಸ್ತೆ ಬದಿಗೆ ನಾನು ತಲುಪಿಸಿದ್ದರೂ ಅದು ಬದುಕುಳಿಯುವ ಸಾಧ್ಯತೆಗಳು ವಿರಳ ಎಂದೇ ಬಾವಿಸಬಹುದು. ಸ್ವಲ್ಪವೇ ಸಮಯದಲ್ಲಿ ಯಾವುದ್ದದರೂ ನಾಯಿಗೆ ಆಹಾರವಾಗುತ್ತಿತ್ತು. ಅಥವಾ ರಕ್ತಸ್ರಾವವಾಗಿ ಸತ್ತು ಬೀಳುತ್ತಿತ್ತು. ಅದು ರಸ್ತೆಯ ನಡುವಲ್ಲೂ ಸಾಯುತ್ತಿತ್ತು, ರಸ್ತೆ ಬದಿಗೆ ನಾನು ತಲುಪಿಸಿದ್ದರೂ ಸಾಯುತ್ತಿತ್ತು, ನಿಜ, ಹಾಗಾದರೆ ಈ ವಿಚಾರದಲ್ಲಿ ನಾನು ಮಾಡಬಹುದಾದ ಕೆಲಸ ಬರಿ ನೋಡಿ ಸಂಕಟ ಪದುವುದಷ್ಟೇ ಆಗಿತ್ತು ಎನ್ನಬಹುದೇ?. ಇಲ್ಲ. ತಲೆಗೆ ಹೊಳೆಯಿತು. ನಾನು ಅದರ ಪ್ರಾಣ ಉಳಿಸುವ ನಿಜವಾದ ಆಶಯ ಹೊಂದಿದ್ದರೆ ಅದನ್ನು ಸುರಕ್ಷಿತವಾದ ಸ್ಥಳದಲ್ಲಿ ರಕ್ಷಿಸಿಡಲು ಮನೆಗೆ ತೆಗೆದುಕೊಂಡು ಹೋಗಬೇಕಿತ್ತು. ಅದನ್ನು ರಸ್ತೆ ಬದಿಗೆ ಸರಿಸಿ ಬಿಟ್ಟು ಹೋಗುವುದು ಬೂಟಾಟಿಕೆಯ ಕ್ರಿಯೆ ಆಗುತ್ತಿತ್ತು. ಅಥವಾ ಅದನ್ನು ವೈದ್ಯರ ಬಳಿ ತೋರಿಸಬೇಕಿತ್ತು. ನನ್ನ ಆಲೋಚನೆಗಳಿಗೆ ತಲೆಬುಡ ಇಲ್ಲವೆನಿಸಿತು. ನೋಡಿದವರಿಗೆ, ನನ್ನ ಕುಟುಂಬದವರಿಗೆ, ವೈದ್ಯರಿಗೆ ತಲೆಕೆಟ್ಟವನಂತೆ ಕಾಣುತ್ತಿದ್ದೆ, ಇದಂತೂ ನಿಜ. ಹಾಗಾದರೆ ಒಂದು ಜೀವ ಕಣ್ಮುಂದೆ ಸಾಯಲು ಬಿಟ್ಟದ್ದು ಒಪ್ಪತಕ್ಕದ್ದೇ?.
ಹೌದು ನಿಜ ಪ್ರಪಂಚದಲ್ಲಿ ಎಷ್ಟೋ ಒತಿಕ್ಯಾತಗಳು ಈ ಸಮಯದಲ್ಲಿ ಸಾಯುತ್ತಿರುತ್ತವೆ. ಅದೇ ಕಾರಣದಿಂದ ಯಾರೂ ಇದರ ಬಗ್ಗೆ ಗಮನ ನೀಡುವುದಿಲ್ಲ. ನಾನ ಸಹ ಅವನ್ನೆಲ್ಲ ತಡೆಯಲು ಸಾದ್ಯವಿಲ್ಲ. ಅವೆಲ್ಲ ಒತಿಕ್ಯಾತಗಳ ಅಥವಾ ಇನ್ನೂ ಎಷ್ಟೋ ಪ್ರಾಣಿಗಳ, ಪಕ್ಷಿಗಳ, ಕೀಟಗಳ ಪ್ರಾಣ ರಕ್ಷಣೆ ನನ್ನೊಬ್ಬನಿಂದ ಅಸಾದ್ಯ. ಅದು ಅದೇ ಜಾತಿಯ ಪ್ರಾಣಿಗಳ ಜವಾಬ್ದರಿಯಿರಬಹುದು. ಒತಿಕ್ಯಾತನ ಸಹಾಯಕ್ಕೆ ಇನ್ನೊದು ಓತಿಯೇ ಬರಬೇಕೇನೋ. ಮಾನವ ಮಾನವನ ಸಹಾಯಕ್ಕೆ ಬಂದಂತೆ. ಹಾಗಾಗಿ ಪ್ರಾಣಿ ಪಕ್ಷಿಗಳ ಜೀವದ ಹೊಣೆ ನನ್ನದಲ್ಲ ಎನಿಸಿ ನಿಟ್ಟುಸಿರು ಬಿಟ್ಟೆ.
ಈ ಭೂಮಿ ಮನುಷ್ಯನ ಸ್ವಂತ ಆಸ್ತಿ ಎಂಬಂತೆ ಉಪಯೋಗಿಸುತ್ತಿದ್ದಾನೆ. ಈ ರಸ್ತೆ ಮಾಡುವ ಮುನ್ನ ಮಾನವ ಯಾವ ಇತರೆ ಪ್ರಾಣಿಗಳನ್ನು ಕೇಳುವುದಿರಲಿ ಅದರ ಕಷ್ಟ ಸುಖಗಳನ್ನು ಕೂಡ ನೋಡದೆ ಈ ಭೂಮಿಯನ್ನು ತನ್ನ ಅನುಕೂಲಕ್ಕೆ ಬಳಸುತ್ತಿದ್ದಾನೆ.
ಸಮಯ ನೋಡಿಕೊಂಡೆ. ಘಂಟೆ ಎರಡಾಗಿತ್ತು. ಬೆಳಿಗ್ಗೆ ಮುದ್ದೆ ನಾಟಿ ಕೋಳಿ ಸಾರು ಹೊಟ್ಟೆ ಬಿರಿಯುವಂತೆ ತಿಂದಿದ್ದರಿಂದ ಹೊಟ್ಟೆ ಏನೂ ಅಷ್ಟಾಗಿ ಹಸಿದಿರಲಿಲ್ಲ.
ಮುಂದುವರೆಯುತ್ತದೆ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ