ಎರಡು ಕೈಗಳ ಕಥೆ

ನನ್ನ ಇಂದಿನ ದಿನವೇ ಚೆನ್ನಾಗಿಲ್ಲ. ಆಫೀಸ್ ನಲ್ಲಿ ಬಾಸ್, ಕೆಲಸ ತಡವಾದದಕ್ಕೆ ಯಗ್ಗಾಮುಗ್ಗಾ ಬೈದಿದ್ದರು. ಇಂದು ಆಫೀಸಿನಿಂದ ಹೊರಡುವುದು ತಡವಾಗಿ ಮನೆಗೆ ಬಂದವನೇ ಹಾಸಿಗೆಯ ಮೇಲೆ ಕುಸಿದು ಬಿದ್ದೆ. ದೇಹಕ್ಕೂ ಅರಾಮೆನಿಸಲಿಲ್ಲ, ಮನಸ್ಸಿಗೂ ಅರಾಮೆನಿಸಲಿಲ್ಲ. ಕಿಚನ್ನಿಗೆ ಹೋಗುವ ಮನಸಿಲ್ಲದೇ, ಸ್ವಲ್ಪ ಹೊತ್ತು ವಿಶ್ರಮಿಸಿ ಹೊರಗೆ ಹೋಗಿ ತಿಂದು ಬಂದರಾಯಿತು ಎಂದು ತಲೆಯನ್ನು ದಿಂಬಿಗೆ ಆನಿಸಿದೆ. ಅಷ್ಟೇ ನೆನಪು. ಆಗಲೇ ಬಹಳ ಸೋತಿದ್ದ ನನ್ನ ಮನಸ್ಸು, ದೇಹ ನನ್ನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಗಾಡ ನಿದ್ರೆಗೆ ಜಾರಿದ್ದೆ. 

ಇಂತಹ ಸ್ಥಿತಿಯಲ್ಲಿ ಇನ್ನಷ್ಟು ದಿಗಿಲು ಹುಟ್ಟಿಸಲೆಂಬಂತೆ ಒಂದು ಭಯಾನಕ ಕೆಟ್ಟ ಕನಸು ಬಿತ್ತು. ಮುಖವೆಲ್ಲಾ ಬೆವರು ಬಂತು, ತಕ್ಷಣ ಬಯದಿಂದ ಎಚ್ಚರಿಕೆಯಾಯಿತು. ಎಷ್ಟು ಹೊತ್ತು ಮಲಗಿದ್ದೇನೋ ಎಂಬ ಅಸ್ಪಷ್ಟ ಯೋಚನೆಯಲ್ಲಿ ಗಡಿಯಾರ ನೋಡಿದೆ. ರಾತ್ರಿ ಹನ್ನೆರಡೂ ವರೆ ಸಮಯ. ನಿದ್ದೆಯಿಂದ ಎಚ್ಚರಗೊಂಡು ಗಡಿಯಾರದ ಕಡೆ ದೃಷ್ಟಿ ಹಾಯಿಸುವುದೇ ತಡ, ನನ್ನ ಹಿಂದಿದ್ದ ಗೋಡೆಯಿಂದ ಎರಡು ಕೈಗಳು ಬಂದು ನನ್ನ ಕುತ್ತಿಗೆಯನ್ನು ಹಿಡಿದವು. ನನ್ನ ತಲೆಯ ಎಡಕ್ಕೆ ಹಾಗೂ ಬಲಕ್ಕೆ ಒಂದೊಂದು ಕೈ. ಕೇವಲ ಕೈಗಳು, ಗೋಡೆಯಿಂದಲೇ ಹುಟ್ಟಿ ಬಂದಂತವು. ಕತ್ತು ಹಿಸುಕಲು ಯತ್ನಿಸಿದವು. ಉಸಿರು ಕಟ್ಟಿದಂತಾಗಿ ಭಯಬೀತನಾಗಿ, ಕೈಗಳಿಂದ ಬಿಡಿಸಿಕೊಳ್ಳಲು ಒದರಿದೆ. ಬಲಿಷ್ಠ ಕೈಗಳು. ಹಿಡಿತ ಸಡಿಲವಾದೊಡನೆ ಎದ್ದು ಕೂತು ಹಿಂದೆ ತಿರುಗಿದೆ. ಗೋಡೆಯಿಂದ ಬಂದಿದ್ದ ಕೈಗಳು ಅಲ್ಲಿರಲಿಲ್ಲ. ಎಲ್ಲವೂ ಮಾಮೂಲಿನಂತಿತ್ತು.

ಇನ್ನೂ ನನಗೆ ಭಯ ಹೋಗಿರಲಿಲ್ಲ. ಇದು ನನ್ನ ಕೆಟ್ಟ ದಿನದ ಪರಿಣಾಮ ನನ್ನ ಬ್ರಮೆ ಇರಬಹುದೇ ಎನ್ನಿಸಿತು. ಆದರೆ ಇಡೀ ಜೀವನದಲ್ಲಿ ದೇವರು ಹಾಗೂ ದೆವ್ವಗಳನ್ನು ನಂಬಿರದ, ಎಂದಿಗೂ ಅವುಗಳ ಅಸ್ತಿತ್ವವನ್ನೇ ಅನುಬವಿಸಿರದ ನನಗೆ ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗಿತ್ತು. ನನ್ನ ನಂಬಿಕೆಗಳನ್ನು ಈ ಕ್ಷಣದಿಂದ ಬದಲಿಸಬೇಕೇನೋ ಎಂಬ ಆತಂಕ. ಈಗ ನಡೆದ ಘಟನೆಗೆ ವಿಜ್ಞಾನ ಉತ್ತರ ಹೇಳಲಾರದು. 

ಇಂತಹ ವಿಚಾರದಲ್ಲಿ ಗೊಂದಲಕ್ಕೀಡಾಗಿದ್ದು ಇದೆ ಮೊದಲು. ಮೈ ಇನ್ನೂ ಬೆವರುತ್ತಿತ್ತು. ರಾತ್ರಿಯ ಊಟ ಇಲ್ಲದೆ ಹೊಟ್ಟೆ ಹಸಿದಿತ್ತು. ಮೈ ನಡುಗುತ್ತಿತ್ತು. ಕೈಗಳು ಬಂದ ಗೋಡೆಯ ಹಿಂದಿದ್ದ ಕಿಚನ್ನಿಗೆ ಹೋಗಲೂ ಭಯವಾಯಿತು. ನನ್ನ ಕಣ್ಣ ಮುಂದಿದ್ದ ಇಡೀ ಚಿತ್ರಣವೇ ಕಲಸಿ ಹೋಯಿತು. ರೂಮಿನ ಬಾಗಿಲ ಬಳಿ ಒಂದು ಉದ್ದನೆಯ ಮೆಟ್ಟಿಲು, ಹತ್ತಿದರೆ ಎಲ್ಲಿಗೂ ಹೋಗುವಂತಿರಲಿಲ್ಲ, ರೂಮಿನಿಂದ ಹೊರಗೆ ನಮ್ಮ ಮನೆಯೇ ಇರಲಿಲ್ಲ. ಕೆಲವು ಅಸ್ಪಷ್ಟ ವ್ಯಕ್ತಿಗಳು. ನಮ್ಮ ಕಂಪನಿಯ ಬಾಸ್ ಸಹ ಅವರ ಮದ್ಯೆ ನಿಂತಿದ್ದ. ತಲೆ ಸುತ್ತಿದಂತಾಯಿತು. ತಕ್ಷಣ ನನ್ನ ಕಣ್ಣು ಬಿಟ್ಟೆ. ನಿದ್ದೆಯಿಂದ ಎಚ್ಚರವಾಗಿತ್ತು. ಈಗಲೂ ನಿಜವಾಗಿ ಎಚ್ಚರವಾಯಿತೋ ಇಲ್ಲವೋ ಎನ್ನುವ ಗೊಂದಲದ ನಡುವೆ ಎದ್ದು ಕಿಚನ್ನಿಗೆ ಹೋಗಿ ಹೊಟ್ಟೆ ತುಂಬಾ ನೀರು ಕುಡಿದೆ.

ಈ ಘಟನೆ ನಡೆದು ಹತ್ತು ವರ್ಷಗಳಾಯಿತು. ಗೋಡೆಯಿಂದ ಕೈಗಳು ಬಂದು ಕೊಲ್ಲಲು ಯತ್ನಿಸಿದ್ದು, ನಿಜವೋ ಕನಸೋ ಎಂಬುದು ಇಂದಿಗೂ ಬಗೆಹರಿಯದ ಪ್ರಶ್ನೆಯಾಗಿ ಉಳಿದಿದೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿಟಕಿ ಸೀಟು

ಬೆಳದಿಂಗಳ ಬಾಲೆ

ಅಜ್ಞಾತ